ಪೆಪ್ಸಿನ್	
ಜಠರರಸದಲ್ಲಿರುವ ಒಂದು ಕಿಣ್ವ. ಜಠರವನ್ನು ಸೇರುವ ಮಾಂಸ ಮೊಟ್ಟೆ ಹಾಲು ಬೇಳೆಗಳಂಥ ಸಸಾರಜನಕಯುತ ಆಹಾರ ಪದಾರ್ಥಗಳನ್ನು ಜೀರ್ಣಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅತ್ಯಲ್ಪ ಗಾತ್ರದ ಪೆಪ್ಸಿನ್ ಕೂಡ ಅದರ ಎಷ್ಟೋ ಪಟ್ಟು ಅಧಿಕ ಗಾತ್ರದ ಆಹಾರ ಪದಾರ್ಥಗಳಲ್ಲಿ ಜೀವರಸಾಯನಿಕ ಕ್ರಿಯೆಗಳನ್ನು ತ್ವರೆಗೊಳಿಸಬಹುದು. ಜೀವಂತ ಪ್ರಾಣಿಗಳಲ್ಲಿ ಮಾತ್ರ ತಯಾರಾಗುವ ಕಿಣ್ವವಿದು. ಕೃತಕವಾಗಿ ಇದನ್ನು ತಯಾರಿಸುವುದು ಸಾಧ್ಯವಿಲ್ಲ. ಶುದ್ಧ ವಸ್ತು ಹೇರಳವಾಗಿ ಸಸಾರಜನಕ ರೂಪದಲ್ಲಿ ಸಿಗುತ್ತದೆ. ಪ್ರಾರಂಭದಲ್ಲಿ ಜಠರದ ಒಳಪೊರೆಯಲ್ಲಿ ಜಡವಾದ ಕಿಣ್ವಜನಕ ಇರುತ್ತದೆ. ಅದು ಸ್ರವಿಸಲ್ಪಟ್ಟು ಜಠರದಲ್ಲಿ ಸುರಿದು ಅಲ್ಲಿಯ ಹೈಡ್ರೊಕ್ಲೋರಿಕ್ ಆಮ್ಲದ ಜೊತೆ ಸೇರಿದ ಕೂಡಲೆ ಕ್ರಿಯಾಶಾಲಿ ಕಿಣ್ವ ಆಗುವುದು. ಜಠರದಲ್ಲಿ ಸ್ವಾಭಾವಿಕವಾಗಿರುವ ಅತಿಯಾದ ಆಮ್ಲತೆಯಲ್ಲಿ ಇದರ ಜೀರ್ಣ ಬಲು ಹೆಚ್ಚು. ಸಸಾರಜನಕಗಳಲ್ಲಿ ಜೋಡಣೆ ಆಗಿರುವ ಕೆಲವು ಅಮೈನೋ ಆಮ್ಲಗಳನ್ನು ಒಡೆದು ಬೇರ್ಪಡಿಸುತ್ತದೆ. ಸುಮಾರು 30 ಗ್ರಾಮಿನಷ್ಟು ಜೀರ್ಣ ಕಿಣ್ವ ನಮ್ಮ ಮೈಬಿಸಿಯಷ್ಟು ಉಷ್ಣತೆಯಲ್ಲಿರುವ ಸುಮಾರು ಒಂಬತ್ತು ಲಕ್ಷ ಲೀಟರ್ ಹಾಲನ್ನು ಮೊಸರುಗಟ್ಟಿಸಬಲ್ಲದು. ಜೀರ್ಣ ಕಿಣ್ವವು ಸಸಾರಜನಕವೇ ಆದರೂ ಅದು ತನ್ನನ್ನು ತಾನೇ ಜೀರ್ಣಿಸದು.

ಇತರ ಸಸಾರಜನಕಗಳಂತೆ ಇದರ ಅಣುತೂಕವೂ ಹಿರಿಯದೇ, 35,000.  ಇದರ ತಯಾರಿಕೆ ಸಾಮಾನ್ಯವಾಗಿ ಹಂದಿ ಜಠರದಿಂದ. ಒಂದು ಹಂದಿಯಲ್ಲಿ ಸರಾಸರಿ 1 ಗ್ರಾಮಿನಷ್ಟು ಸಿಗುತ್ತದೆ. ಚರ್ಮ ಹದಮಾಡುವ ಮುನ್ನ, ಚಕ್ಕಳದಿಂದ ಕೂದಲೇ ಮುಂತಾದ ಅನಪೇಕ್ಷಿತ ಮೇಲ್ಭಾಗಗಳನ್ನು ತೆಗೆದುಹಾಕಲು ಇದು ಬಳಕೆಯಲ್ಲಿದೆ. ಜೆಲಟಿನನ್ನು ಕೂಡ ಇದು ವಿಲೀನಿಸಬಲ್ಲದು. ಏಕಾಣುಜೀವಿಗಳಂಥ ರೋಗಾಣುಗಳನ್ನು ಪ್ರಯೋಗಾಲಯದಲ್ಲಿ ಕೃತಕವಾಗಿ ಬೆಳೆಸಲು ಬೇಕಾದ ಪೆಪ್ಟೋನನ್ನು (ಅರೆಜೀರ್ಣಿಸಿದ ಸಸಾರಜನಕ) ತಯಾರಿಸಲೂ ಉಪಯುಕ್ತ.   						(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ